ಕಳ್ಳಿ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ಸಾಮಾನ್ಯವಾಗಿ ಎಲೆಗಳಿಲ್ಲದ, ದಪ್ಪ ಹಾಗೂ ರಸವತ್ತಾದ ಕಾಂಡವುಳ್ಳ ಒಂದು ವಿಶೇಷ ಬಗೆಯ ಸಸ್ಯ (ಕ್ಯಾಕ್ಟಸ್). ಸಾಧಾರಣವಾಗಿ ಕ್ಯಾಕ್ಟೇಸೀ ಕುಟುಂಬಕ್ಕೆ ಸೇರಿದ ಸಸ್ಯಗಳಿಗೇ ಈ ಹೆಸರು ಹೆಚ್ಚು ಅನ್ವಯವಾಗುವುದಾದರೂ ಬೇರೆ ಕುಟುಂಬಗಳಿಗೆ ಸೇರಿದ ಕೆಲವು ಸಸ್ಯ ಜಾತಿಗಳನ್ನೂ ಕಳ್ಳಿಗಳು ಎಂದು ಕರೆಯುವುದುಂಟು. ಉದಾಹರಣೆಗೆ ಯೂಫೋರ್ಬಿಯೇಸೀ, ಲಿಲಿಯೇಸೀ, ಅಮರಿಡೇಸೀ ಮತ್ತು ಕ್ರ್ಯಾಸುಲೇಸೀ ಕುಟುಂಬದ ಕೆಲವು ಸಸ್ಯಗಳು.

 ಕ್ಯಾಕ್ಟೇಸೀ ಕುಟುಂಬಕ್ಕೆ ಸೇರಿದ ಕೆಲವು ಮುಖ್ಯ ಬಗೆಯ ಕಳ್ಳಿಗಳನ್ನು ಇಲ್ಲಿ ವಿವರಿಸಲಾಗಿದೆ. ಈ ಕುಟುಂಬದಲ್ಲಿ ಸುಮಾರು 400 ಜಾತಿಗಳು ಮತ್ತು 1,700 ಪ್ರಭೇದಗಳಿವೆ. ತಮ್ಮ ರೂಪದ ವೈವಿಧ್ಯಕ್ಕೂ ವೈಚಿತ್ರ್ಯಕ್ಕೂ ಹೂಗಳ ಸೌಂದರ್ಯಕ್ಕೂ ಹೆಸರಾಗಿರುವ ಇವನ್ನು ಅಲಂಕಾರ ಸಸ್ಯಗಳಾಗಿ ಉದ್ಯಾನಗಳಲ್ಲಿ ಬೆಳೆಸುತ್ತಾರೆ. ಮೂಲತಃ ಅಮೆರಿಕದ ಉಷ್ಣ ಮತ್ತು ಸಮಶೀತೋಷ್ಣವಲಯಗಳ ನಿವಾಸಿಗಳಿವು.

 ಕಳ್ಳಿಗಳು ಸಾಮಾನ್ಯವಾಗಿ ಶುಷ್ಕವಾತಾವರಣವಿರುವ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯುತ್ತವೆ. ಮರುಭೂಮಿಯಂಥ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಾಯಕವಾದ ಹಲವಾರು ರೂಪ ವೈವಿಧ್ಯಗಳನ್ನಿವು ತೋರುತ್ತವೆ. ಇವುಗಳಲ್ಲಿ ಸಾಧಾರಣವಾಗಿ ಎಲೆಗಳಿರುವುದಿಲ್ಲ. ಇದ್ದರೂ ಬಲು ಚಿಕ್ಕದಾಗಿ ಪೊರೆಗಳಂತೆಯೊ ಮುಳ್ಳುಗಳಂತೆಯೊ ಇರುತ್ತವೆ. ಕಾಂಡ ದಪ್ಪ ಗಾತ್ರದ್ದಾಗಿ ರಸಭರಿತವಾಗಿರುತ್ತದೆ. ಅಲ್ಲದೆ ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪತ್ರಹರಿತ್ತಿದ್ದು ಎಲೆಗಳಂತೆಯೇ ಕಾಂಡ ಸಹ ದ್ಯುತಿಸಂಶ್ಲೇಷಣೆ ಕಾರ್ಯವನ್ನು ನಿರ್ವಹಿಸುತ್ತದೆ. ಕಾಂಡದ ಮೇಲೆಲ್ಲ ಗಂಟುಗಳು, ಏಣುಗಳು ಇದ್ದು ಅಲ್ಲಲ್ಲಿ ಮುಳ್ಳುಗಳೂ ಒರಟು ಕೂದಲುಗಳು ಇವೆ. ಕಾಂಡಕ್ಕೂ ಬೇರೆ ಬೇರೆ ಬಗೆಯ ಆಕಾರ, ಗಾತ್ರ, ರೂಪ ಇವೆ. ಅದು ಕೆಲವು ಪ್ರಭೇದಗಳಲ್ಲಿ ಚಪ್ಪಟೆಯಾಗಿಯೂ ಕೆಲವದರಲ್ಲಿ ಕಡ್ಡಿಯಂತೆಯೂ ಇನ್ನು ಕೆಲವು ಬಗೆಗಳಲ್ಲಿ ಕೊಳವೆಗಳಂತೆಯೂ ಇರಬಹುದು. ಆಕಾರ ಯಾವುದೇ ಇರಲಿ ಎಲ್ಲ ಬಗೆಯ ಕಾಂಡಗಳಲ್ಲೂ ಒಳಗಡೆ ಮೃದುವಾದ ಅಂಗಾಂಶವಿದೆ. ಇದರಿಂದಾಗಿ ಕಾಂಡ ನೀರನ್ನು ಶೇಖರಿಸಿ ಇಡಬಲ್ಲದು. ಕೆಲವು ಪ್ರಭೇದಗಳಲ್ಲಿ ಎಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರವಾಗಿರುತ್ತದೆಂದರೆ ಮರುಭೂಮಿಯಲ್ಲಿ ಪಯಣಿಸುವ ಜನ ವಿಷಮ ಸಂದರ್ಭಗಳಲ್ಲಿ ಈ ಗಿಡಗಳನ್ನು ಕತ್ತರಿಸಿ ಇವುಗಳಿಂದ ಒಸರುವ ನೀರನ್ನು ಕುಡಿದು ಪ್ರಾಣ ಕಾಪಾಡಿಕೊಂಡಿರುವುದೂ ಉಂಟು. ಕಳ್ಳಿಗಳು ನೀರಿಲ್ಲದ ಬಂಜರು ಭೂಮಿಗಳಲ್ಲಿ ಬೆಳೆಯುವುದರಿಂದ ಆವಿ ವಿಸರ್ಜನಾ ಕ್ರಿಯೆಯನ್ನು (ಟ್ರಾನ್ಸ್‍ಪಿರೇಷನ್) ತಡಿಯುವುದು ಇವಕ್ಕೆ ಅತ್ಯಾವಶ್ಯಕ. ಬೇರೆ ಗಿಡಗಳಲ್ಲಿ ನಡೆದಂತೆ ಇಲ್ಲೂ ಆ ಕ್ರಿಯೆ ನಡೆದರೆ ಈ ಗಿಡಗಳು ನೀರಿಲ್ಲದೆ ಸಾಯಬೇಕಾಗುತ್ತದೆ. ಇದರಿಂದಾಗಿ ಕಳ್ಳಿಗಳಲ್ಲಿ ಆವಿ ವಿಸರ್ಜನಾಕ್ರಿಯೆಯನ್ನು ತಡೆಗಟ್ಟಲು ಬೇಕಾದ ಅನೇಕ ಮಾರ್ಪಾಡುಗಳಿವೆ. ಕಾಂಡದ ಮೇಲೆ ಬಲುಮಂದವಾಗಿ ಕ್ಯೂಟಿನ್ ಎಂಬ ಮೇಣದಂಥ ವಸ್ತು ಹರಡಿರುತ್ತದೆ. ಆವಿ ವಿಸರ್ಜನೆಯ ಪ್ರಮುಖ ಅಂಗಗಳಾದ ಎಲೆಗಳು ಇಲ್ಲಿ ಮುಳ್ಳುಗಳಾಗಿಯೂ ಪೊರೆಗಳಾಗಿಯೊ ಮಾರ್ಪಾಡಾಗಿವೆ.

 ಕಳ್ಳಿಗಳು ತಮ್ಮ ಹೂಗಳ ಸೌಂದರ್ಯಕ್ಕೆ ಪ್ರಸಿದ್ಧವಾಗಿವೆ. ಹೂಗಳು ಒಂಟೊಂಟಿಯಾಗಿಯೊ ಗೊಂಚಲುಗಳಲ್ಲಿಯೊ ಅರಳುತ್ತವೆ. ಇವು ದೊಡ್ಡ ಗಾತ್ರದವೂ ದ್ವಿಲಿಂಗಿಗಳೂ ಆಗಿವೆ. ದಳಗಳು ಬಿಡಿಯಾಗಿವೆ. ಕಾಯಿ ಹಲವಾರು ಬೀಜಗಳುಳ್ಳ ರಸಭರಿತವಾದ ಬೆರಿ ಮಾದರಿಯದು.

 ಕಳ್ಳಿಗಳ ಬೇಸಾಯ: ಕಳ್ಳಿಗಳು ಅಲಂಕಾರ ಸಸ್ಯಗಳೆಂದು ಹೆಸರಾಗಿರುವುದರಿಂದ ಇವುಗಳ ಬೇಸಾಯಕ್ಕೆ ಉದ್ಯಾನಗಾರಿಕೆಯಲ್ಲಿ ಒಂದು ಮುಖ್ಯ ಸ್ಥಾನ ಉಂಟು. ಇವನ್ನು ಬೀಜಗಳಿಂದ ವೃದ್ಧಿ ಮಾಡಬಹುದಾದರೂ ಕಾಂಡದ ತುಂಡುಗಳನ್ನು ನೆಟ್ಟು ಬೆಳೆಸುವುದೇ ಹೆಚ್ಚು ರೂಢಿಯಲ್ಲಿರುವ ಕ್ರಮ. ಕಳ್ಳಿಗಳು ಮುಖ್ಯವಾಗಿ ಉಷ್ಣವಲಯದ ಸಸ್ಯಗಳಾದುದರಿಂದ ಹೆಚ್ಚು ತೇವಾಂಶವನ್ನು ಸಹಿಸಲಾರವು. ಇವುಗಳ ಬೆಳವಣಿಗೆಗೆ 50 '-250 ' ಸೆಂ. ಉಷ್ಣತೆ ಮತ್ತು ನೀರು ಸರಾಗವಾಗಿ ಇಂಗಿಹೋಗುವಂಥ ದಪ್ಪ ಮರಳುಮಿಶ್ರಿತ ಗೋಡುಮಣ್ಣು ಉತ್ತಮ. ಕುಂಡಗಳಲ್ಲಿ ಕಳ್ಳಿಗಳನ್ನು ಬೆಳೆಸುವಾಗ ಒಳ್ಳೆಯ ಕುಂಡಗಳನ್ನು ಆರಿಸಿ ಅವುಗಳ ತಳದಲ್ಲಿ ಒಂದು ಪದರ ಹಂಚಿನ ಚೂರುಗಳು, ಒಂದು ಪದರ ಕಲ್ಲು, ದಪ್ಪ ಮರಗಳನ್ನು ತುಂಬಿ ಮೇಲ್ಭಾಗದಲ್ಲಿ ಚೆನ್ನಾಗಿ ಕೊಳೆತ ದನದ ಗೊಬ್ಬರ ತುಂಬಬೇಕು. ಮಧ್ಯಭಾಗದಲ್ಲಿ ಕಳ್ಳಿಯ ಕಾಂಡದ ತುಂಡನ್ನು ನೆಟ್ಟು, ಚೆನ್ನಾಗಿ ನೀರು ಹಾಕಿ, ಕುಂಡವನ್ನು ನೆರಳಿನಲ್ಲಿ ಇಡಬೇಕು. ಕಳ್ಳಿಯ ತುಂಡು ಬೆಳೆಯುವ ತನಕ ಆಗಾಗ್ಗೆ ನೀರನ್ನು ಹಾಕುತ್ತಲೇ ಇರಬೇಕು. ಕಳ್ಳಿಗಳನ್ನು ಒಂದು ಕುಂಡದಲ್ಲಿ ನೆಟ್ಟ ಮೇಲೆ ಬಹು ದಿನಗಳ ವರೆಗೆ ಕುಂಡ ಬದಲಾಯಿಸದೆ ಹೋದರೆ ಸಸ್ಯದ ಬೆಳವಣಿಗೆ ಕುಂಠಿತವಾಗುವುದಲ್ಲದೆ ಅವಕ್ಕೆ ರೋಗ ಮತ್ತು ಕೀಟಗಳು ತಗಲುತ್ತವೆ. ಆದ್ದರಿಂದ ಕಳ್ಳಿಗಳನ್ನು ನೆಟ್ಟ ಒಂದು ವರ್ಷದ ಅನಂತರ ಬೇರೆ ಕುಂಡಕ್ಕೆ ಬದಲಾಯಿಸಬೇಕು. ಕುಂಡ ಬದಲಾಯಿಸಲು ಮಾರ್ಚ್-ಏಪ್ರಿಲ್ ತಿಂಗಳು ಉತ್ತಮವಾದ ಕಾಲ.

 ಬಿಸಿಲು ಜಾಸ್ತಿಯಾದಾಗ ಕುಂಡಗಳು ಚೆನ್ನಾಗಿ ಕಾದುಬಿಡುತ್ತವೆ. ಆಗ ಕಳ್ಳಿಯ ಬೇರುಗಳು ಸುಟ್ಟುಹೋಗಿ ಕೊನೆಗೆ ಸಸ್ಯವೇ ಸತ್ತುಹೋಗುವ ಸಂಭವವುಂಟು. ಇದನ್ನು ತಡೆಗಟ್ಟಲು ಸಸ್ಯವಿರುವ ಕುಂಡಕ್ಕಿಂತ ದೊಡ್ಡ ಕುಂಡವನ್ನು ತೆಗೆದುಕೊಂಡು ಅದರೊಳಗೆ ಸಸ್ಯವಿರುವ ಕುಂಡದ ಯಾವ ಭಾಗವೂ ಹೊರಕುಂಡಕ್ಕೆ ತಗಲದಂತೆ ದಪ್ಪ ಹರಳಿನ ಮರಳನ್ನು ಹಾಕಿ ಇಡಬೇಕು.

 ಕಳ್ಳಿಗಳಿಗೆ ಹಲವಾರು ಬಗೆಯ ಕೀಟಗಳೂ ಅಂಟಿ ಅವನ್ನು ಹಾಳು ಮಾಡುವುದುಂಟು. ಇವುಗಳಲ್ಲಿ ತಿಗಣೆ, ಬೇರಿನ ತಿಗಣೆ, ಶಲ್ಕಕಿರೀಟ, ಇರುವೆ ಹಾಗೂ ಹೇನುಗಳು ಮುಖ್ಯವಾದವು. ನಿಕೊಟಿನ್, 5-ಬಿ.ಎಚ್.ಸಿ., ಡಿ.ಡಿ.ಟಿ. ಮುಂತಾದ ಕೀಟನಾಶಕಗಳನ್ನು ಸಿಂಪಡಿಸುವುದು, ಕೀಟಗಳ ಮೊಟ್ಟೆಗಳನ್ನು ತೆಗೆದು ಸುಡುವುದು, ಕೀಟಪೀಡಿತ ಸಸಿಗಳ ಬೇರುಗಳನ್ನು ತೆಗೆದು ಹಾಕುವುದು - ಇವು ಕೀಟಗಳನ್ನು ನಿವಾರಿಸುವ ಕೆಲವು ಮಾರ್ಗಗಳು.

 ಉದ್ಯಾನಪ್ರಾಮುಖ್ಯ ಇರುವ ಕೆಲವು ಮುಖ್ಯ ಬಗೆಯ ಕಳ್ಳಿಗಳನ್ನು ಕೆಳಗೆ ಹೆಸರಿಸಲಾಗಿದೆ: 1. ಪೆರೆಸ್ಕಿಯ, 2. ಒಪನ್ಶಿಯ, 3. ಎಪಿಫಿಲಮ್, 4. ಫಿಲೊಕ್ಯಾಕ್ಟಸ್, 5. ಮ್ಯಾಮಿಲೇರಿಯ. 6. ಎಕೈನೊಸಿರಸ್, 7. ಆಸ್ಟ್ರೊಫೈಟಮ್, 8. ಎನ್‍ಸಿಫಲೊಕಾರ್ಪಸ್, 9. ಎಕೈನೊಕ್ಯಾಕ್ಟಸ್, 10. ಎರಿಯೊಸಿರಿಯಸ್, 11. ಸಿರಿಯಸ್, 12. ಎಸ್ಪೋಸ್ಪೊ.

 ಕೆಲವು ಬಗೆಯ ಕಳ್ಳಿಗಳಿಗೆ ಔಷಧೀಯ ಗುಣಗಳಿವೆ. ಉದಾಹರಣೆಗೆ ಸಿರಿಯಸ್ ಗ್ರಾಂಡಿಫ್ಲೋರಸ್ ಎಂಬ ಕಳ್ಳಿಯ ಎಳೆಯ ಕಂಡವನ್ನು ಹೃದಯಕ್ರಿಯೆಯನ್ನು ಉತ್ತೇಜನಗೊಳಿಸಲು ಬಳಸುತ್ತಾರೆ. ಇದರ ಕಷಾಯವನ್ನು ಜಲೋದರ (ಡ್ರಾಪ್ಸಿ) ರೋಗ ನಿವಾರಣೆಗೆ ಉಪಯೋಗಿಸುತ್ತಾರೆ. ಪಾಪಾಸು ಕಳ್ಳಿಯ (ಒಪನ್ಶಿಯ) ಹಣ್ಣುಗಳನ್ನು ಬೇಯಿಸಿ ನಾಯಿಕೆಮ್ಮನ್ನು ಗುಣಪಡಿಸಲು ಬಳಸುವುದುಂಟು.

 ಮೇಲೆ ಹೇಳಿದ ಕ್ಯಾಕ್ಟೇಸೀ ಕುಟುಂಬದ ಸಸ್ಯಗಳೇ ಅಲ್ಲದೆ ಯೂಫೋರ್ಬಿಯೇಸೀ ಕುಟುಂಬದ ಯೂಫೋರ್ಬಿಯ ಮತ್ತು ಕ್ಯಾರಲೂಮ ಜಾತಿಯ ಸಸಿಗಳು ಅಮರಿಲ್ಲಿಡೇಸೀ ಕುಟುಂಬದ ಅಗೇವ್ ಹಾಗೂ ಫರ್‍ಕ್ರಿಯ ಎಂಬ ಜಾತಿಯ ಸಸ್ಯಗಳೂ ಲಿಲಿಯೇಸೀ ಕುಟುಂಬಕ್ಕೆ ಸೇರಿದ ಯಕ್ಕ, ಆಲೊಗಳೂ ಕಾಸುಲೇಸೀ ಕುಟುಂಬದ ಕ್ರ್ಯಾಸುಲ, ಕ್ಯಾಲ್ಯಾಂಕೋಯಿ, ಬ್ರೈಯೋಫಿಲಮ್ ಮುಂತಾದವೂ ಸಾಮಾನ್ಯ ಭಾಷೆಯಲ್ಲಿ ಕಳ್ಳಿಗಳೆಂದೇ ಹೆಸರಾಗಿವೆ.   

 (ಎಂ.ಎಚ್.ಎಂ.; ಎಂ.ಸಿ.ಆರ್.)